     ಮೂಲದೊಡನೆ ಪರಿಶೀಲಿಸಿ

ಏಕವೇಗದ ಮೋಟಾರ್: ಪುರೈಕೆ ಮಾಡಿದ ಪ್ರತ್ಯಾವರ್ತೀ ವಿದ್ಯುತ್ಪ್ರವಾಹದ (ಆಲ್ಟರ್ನೇಟಿಂಗ್ ಕರೆಂಟ್, ಎಸಿ) ಆವರ್ತಸಂ ಖ್ಯೆಗೆ (ಫ್ರೀಕ್ವೆನ್ಸಿ) ಅನುಗುಣವಾದ ಸ್ಥಿರ ಏಕವೇಗದಿಂದ ಕ್ರಿಯೆ ಎಸಗುವ ಒಂದು ಎಸಿ ಮೋಟಾರ್ (ಸಿಂಕ್ರನಸ್ ಮೋಟಾರ್). ವಿದ್ಯುಚ್ಛಕ್ತಿಯನ್ನು 

ಯಾಂತ್ರಿಕಶಕ್ತಿಯನ್ನಾಗಿ ಪರಿವರ್ತನೆ ಮಾಡಲು ಉಪಯೋಗಿಸುವ ಮೋಟಾರುಗಳಲ್ಲಿ ಏಕವೇಗದ ಮೋಟಾರ್ ಬಲು ಮುಖ್ಯ. ಎಸಿ ಪ್ರವಾಹವನ್ನು ವೈಂಡಿಂಗುಗಳ ಮೂಲಕ ಕಬ್ಬಿಣದ ಅಂತರಕದ (ಕೋರ್) ಸುತ್ತಲೂ ಹರಿಯುವಂತೆ ಮಾಡಿದರೆ ಪ್ರತ್ಯಾವರ್ತಿಸುವ ಕಾಂತ 

ಅಭಿವಾಹ (ಮ್ಯಾಗ್ನೆಟಿಕ್ ಫ್ಲಕ್ಸ್‌) ಉಂಟಾಗುವುದು. ಏಕಾವಸ್ಥೆಯ (ಸಿಂಗಲ್ ಫೇಸ್û) ಪ್ರವಾಹವನ್ನು ಉಪಯೋಗಿಸಿದಾಗ ಏಕಾವಸ್ಥೆಯ ಅಭಿವಾಹವಾಗುತ್ತದೆ. 900 ಅಂತರದ ಎರಡು ಅವಸ್ಥೆಯ ಪ್ರವಾಹಗಳ ಅಥವಾ 1200 ಅಂತರದ ಮೂರು ಅವಸ್ಥೆಯ 

ಪ್ರವಾಹಗಳ ಉಪಯೋಗದಿಂದ ಆವರ್ತಕಾಂತಕ್ಷೇತ್ರ (ರೊಟೇಟಿಂಗ್ ಮ್ಯಾಗ್ನೆಟಿಕ್ ಫೀಲ್ಡ್‌) ಉದ್ಭವಿಸುವುದು. ಒಂದು ದೃಷ್ಟಿಯಿಂದ ನೋಡಿದರೆ ಒಂದೇ ಅವಸ್ಥೆಯ ಕಾಂತಕ್ಷೇತ್ರವನ್ನು ಸಹ ಪರಸ್ಪರ ವ್ಯತಿರಿಕ್ತ ದಿಕ್ಕುಗಳಲ್ಲಿ ತಿರುಗುವ ಎರಡು ಆವರ್ತ ಸದಿಶಗಳ 

(ರೊಟೇಟಿಂಗ್ ವೆಕ್ಟರ್ಸ್) ಪರಿಣಾಮವೆಂದು ಹೇಳಬಹುದು. ಹೇಗೆಂದರೆ ಏಕಾವಸ್ಥೆಯ ಮೋಟಾರುಗಳನ್ನು ಈ ಎರಡು ದಿಕ್ಕುಗಳ ಪೈಕಿ ಯಾವ ದಿಕ್ಕಿನಲ್ಲಿ ಬೇಕಾದರೂ ತಿರುಗುವಂತೆ ಮಾಡಬಹುದು. ಇದು ಚಿತ್ರದಿಂದ ಸ್ಪಷ್ಟವಾಗುತ್ತದೆ. ಆದ್ದರಿಂದ ಏಕವೇಗದ 

ಮೋಟಾರುಗಳನ್ನು ಒಂದು, ಎರಡು ಅಥವಾ ಮೂರು ಅವಸ್ಥೆಗಳಿಗೆ ಅನುಗುಣವಾಗಿ ತಯಾರಿಸುವರು.
ಏಕವೇಗದ ಯಂತ್ರಗಳು ಮೂರು ಅಂಗಗಳನ್ನು ಒಳಗೊಂಡಿವೆ : ಕಾಂತಮಂಡಲ (ಮ್ಯಾಗ್ನೆಟಿಕ್ ಸಕೂರ್ಯ್‌ಟ್), ವಿದ್ಯುನ್ಮಂಡಲ ಮತ್ತು ಯಾಂತ್ರಿಕ ಅಂಗಗಳು. ಕಾಂತಮಂಡಲ ಉತ್ತರ-ದಕ್ಷಿಣ ಧ್ರುವಗಳ ಜೊತೆಗಳನ್ನೊಳಗೊಂಡಿವೆ. ಅಲ್ಲದೆ ಇವುಗಳ ಅಭಿವಾಹಗಳು 

ಒಂದೆಡೆಯಿಂದ ಇನ್ನೊಂದೆಡೆಗೆ ನಿರ್ದಿಷ್ಟವಾದ ರೀತಿಯಲ್ಲಿಯೂ ಸುಲಭವಾಗಿಯೂ ಹಾಯ್ದು ಹೋಗುವುದಕ್ಕೋಸ್ಕರ ನಿಮ್ನ ಕಾಂತ ನಿರೋಧಕದ (ಲೋ ರೆಲಕ್ಟೆನ್ಸ್‌) ಪಥವನ್ನು ನಿರ್ಮಿಸಿರುತ್ತಾರೆ. ಈ ಧ್ರುವಗಳು ಸಾಮಾನ್ಯವಾಗಿ ಭ್ರಾಮಕದ (ರೋಟರ್) ಮೇಲಿವೆ. 

ಧ್ರುವಗಳನ್ನು ಬಹಿರ್ಗತ (ಸೇಲಿಯಂಟ್) ಮತ್ತು ಅಂತರ್ಗತ (ನಾನ್ ಸೇಲಿಯಂಟ್) ಎಂಬ ಎರಡು ವಿಧಗಳಲ್ಲಿ ನಿರ್ಮಿಸಬಹುದು. ಕಡಿಮೆ ವೇಗದ ಮೋಟಾರುಗಳಲ್ಲಿ ಬಹಿರ್ಗತವಾಗಿಯೂ ಇರುತ್ತವೆ. ಪ್ರತಿಯೊಂದು ಉತ್ತರಧ್ರುವದಿಂದ ಹೊರಬಿದ್ದ ಅಭಿವಾಹವೂ ಸ್ಟೇಟರಿನ 

ಮೂಲಕವಾಗಿ ಹೋಗಿ ದಕ್ಷಿಣ ಧ್ರುವವನ್ನು ಸೇರುತ್ತದೆ.
ವಿದ್ಯುನ್ಮಂಡಲದಲ್ಲಿ ಎರಡು ಶಾಖೆಗಳಿವೆ : ಸ್ಟೇಟರಿನಲ್ಲಿ ಅಡಗಿದ ವೈಂಡಿಂಗುಗಳನ್ನು ಒಳಗೊಂಡ ಎಸಿ ಶಾಖೆ ಮತ್ತು ರೋಟರಿನ ಧ್ರುವಗಳ ಮೇಲೆ ಸುತ್ತಿರುವ ಡಿಸಿ ಪ್ರವಾಹದ ಶಾಖೆ.
ಕೊನೆಯದಾಗಿ ಯಾಂತ್ರಿಕ ಅಂಗಗಳೆಂದರೆ ಮೋಟಾರಿನ ಲೋಹಮಯ ಹೊದಿಕೆ, ಭ್ರಾಮಕದ ಧಾರಕಗಳು (ಬೇರಿಂಗ್ಸ್‌) ಪೀಠಗಳು, ಭೂಫಲಕ (ಬೆಡ್ ಪ್ಲೇಟ್)-ಇವೇ ಮುಖ್ಯವಾದುವು.
ಸಮಾನವೇಗ: ಏಕವೇಗದ ಮೋಟಾರುಗಳ ವೇಗ ವಿದ್ಯುಚ್ಛಕ್ತಿಯ ಆವರ್ತಸಂಖ್ಯೆ ಮತ್ತು ಧ್ರುವಗಳ ಜೊತೆಗಳ ಸಂಖ್ಯೆ ಇವುಗಳಿಂದ ನಿಗದಿ ಮಾಡಲ್ಪಡುತ್ತದೆ. ಈ ವೇಗಕ್ಕೆ ಏಕವೇಗ (ಸಿಂಕ್ರನಸ್ ಸ್ಪೀಡ್) ಎಂದು ಹೆಸರು. ಇದರ ದರವನ್ನು ಎಂದರೆ ಮಿನಿಟಿಗೆ ಪುರ್ಣ 

ಪರಿಭ್ರಮಣೆಗಳು (ಡಿಠಿm-ರಿವೊಲ್ಯೂಷನ್ಸ್‌ ಪರ್ ಮಿನಿಟ್)-ಈ ರೀತಿಯಾಗಿ ನಿಷ್ಕರ್ಷೆ ಮಾಡಬಹುದು.
ಏಕವೇಗದ ಡಿಠಿm =   
ಭ್ರಾಮಕ ಮತ್ತು ಸ್ಟೇಟರ್: ಈ ಭಾಗಗಳ ರಚನೆಯಲ್ಲಿ ಏಕವೇಗ ಮೋಟಾರುಗಳು ಎಸಿ ಆಲ್ಟರ್ನೇಟರುಗಳನ್ನು ಹೋಲುತ್ತವೆ. ಆದರೆ ಈ ಮೋಟಾರುಗಳ ಧ್ರುವಗಳ ಮುಖಗಳಲ್ಲಿ ತಾಮ್ರದ ಸಲಾಕಿಗಳಿಂದ ತಯಾರಿಸಿದ ಧ್ರುವಮುಖ (ಪೋಲ್ ಫೇಸ್) ವೈಂಡಿಂಗುಗಳನ್ನು 

ಹುದುಗಿಸಲಾಗಿದೆ.
ಭ್ರಾಮಕದ ಮುಖ್ಯ ವಿಭಾಗಗಳು : ದಂಡ (ಶಾಫ್ಟ್‌), ಸ್ಪೈಡರ್ ಮತ್ತು ಧ್ರುವಗಳು. ದಂಡ ಸಶಕ್ತ ಉಕ್ಕಿನಿಂದ ತಯಾರಾದದ್ದು. ಸ್ಪೈಡರಿನ ರಚನೆ ಸಾಮಾನ್ಯವಾಗಿ ಉಕ್ಕಿನ ಎರಕದಿಂದ. ಇದನ್ನು ದಂಡದ ಮೇಲೆ ಕೀಲಿಗಳಿಂದಲೂ (ಕೀ) ಮತ್ತು ಸಂಕುಚನೆಯ (ಶ್ರಿಂಕಿಂಗ್) 

ಅಥವಾ ಬೋಲ್ಟುಗಳ ಮೂಲಕವಾಗಿಯೂ ಭದ್ರಪಡಿಸಿರುತ್ತಾರೆ. ಧ್ರುವಗಳನ್ನು ಉತ್ತಮ ಕಾಂತ ಗುಣಗಳ ವಿಶೇಷ ಉಕ್ಕಿನ ತಗಡುಗಳಿಂದ ನಿರ್ಮಿಸಿ ಒಟ್ಟುಗೂಡಿಸಿ ಸ್ಪೈಡರಿನಲ್ಲಿ ಕೆತ್ತಲ್ಪಟ್ಟಿರುವ ಸಂಧಿಗಳ ಮೇಲೆ ಕೀಲಿಗಳ ಸಹಾಯದಿಂದ ಭದ್ರವಾಗಿ ಕೂಡಿಸಿರುತ್ತಾರೆ. ಅತಿ 

ಚಿಕ್ಕ ಮೋಟಾರುಗಳಲ್ಲಿ ಧ್ರುವಗಳು ಮತ್ತು ಸ್ಪೈಡರುಗಳನ್ನು ಏಕಭಾಗವಾಗಿ ಎರಕ ಹೊಯ್ದಿರುತ್ತಾರೆ. ಅಥವಾ ಧ್ರುವಗಳನ್ನು ಸ್ಪೈಡರಿನ ಮೇಲೆ ಸಣ್ಣ ಸಣ್ಣ ದಿಣ್ಣೆಗಳಂತೆ ಕೆತ್ತಿರುತ್ತಾರೆ. ಇದರ ವೈಶಿಷ್ಟ್ಯವೇನೆಂದರೆ ಸ್ಟೇಟರಿನ ಪ್ರವಾಹದ ಪ್ರತಿಕ್ರಿಯಾ ಘಟಕದ (ರೀಆಕ್ಟಿವ್ 

ಕಾಂಪೊನೆಂಟ್) ದೆಸೆಯಿಂದ ಈ ದಿಣ್ಣೆಗಳಿಗೆ ಕಾಂತತೆ ಉಂಟಾಗಿ ಧ್ರುವಗಳಾಗುವುವು. ಇವಕ್ಕೆ ಡಿಸಿ ಪ್ರವಾಹದ ವೈಂಡಿಂಗುಗಳು ಬೇಕಾಗುವುದಿಲ್ಲ. ಆದರೆ ದೊಡ್ಡ ಮೋಟಾರುಗಳ ಧ್ರುವಗಳು ಪ್ರತ್ಯೇಕವಾದ ಡಿಸಿ ಪ್ರವಾಹದ ಸಹಾಯದಿಂದ ಮಾತ್ರ ಸಮರ್ಪಕವಾಗಿ ಕೆಲಸ 

ಮಾಡಲು ಸಾಧ್ಯ.
ಸ್ಟೇಟರಿನ ಆಂತರಕವನ್ನು ಸಿಲಿಕನ್ ಮಿಶ್ರಿತವಾದ ವಿಶೇಷ ತರಗತಿಯ ಉಕ್ಕಿನ ಪಟ್ಟಿಕೆಗಳಿಂದ (ಲ್ಯಾಮಿನೇಶನ್ಸ್‌) ಮಾಡಿರುತ್ತಾರೆ. ಈ ಪಟ್ಟಿಕೆಗಳನ್ನು ರೋಧನ (ಇನ್ಸುಲೇಷನ್) ವಸ್ತುವಾದ ಫ್ಲಾಷ್ ಎನಾಮಲಿನಿಂದ ಸವರಿರುತ್ತಾರೆ. ಈ ರೀತಿಯಲ್ಲಿ ತಯಾರಿಸಿದ 

ಪಟ್ಟಿಕೆಗಳನ್ನು ಉಪಯೋಗಿಸುವುದರಿಂದ ಸ್ಟೇಟರಿನಲ್ಲಿ ಐರನ್ ನಷ್ಟಗಳು ಬಹಳ ಕಡಿಮೆಯಾಗುತ್ತವೆ. ಮತ್ತು ಮೋಟಾರಿನ ದಕ್ಷತೆ ಹೆಚ್ಚಾಗಲು ಸಾಧ್ಯವಾಗುತ್ತದೆ. ಈ ಪಟ್ಟಿಕೆಗಳನ್ನು ಗಟ್ಟಿ ಮುಟ್ಟಾದ ಉಕ್ಕಿನ ಹೊರಚೌಕಟ್ಟಿನಲ್ಲಿ ಬಿಗಿಯಾಗಿ ಸ್ಥಾಪಿಸಿರುತ್ತಾರೆ. ಮಟ್ಟವಾಗಿ 

ಯಂತ್ರದಿಂದ ಹತ್ತರಿ ಹಿಡಿದ ಲೋಹದ ಭೂಫಲಕದ ಮೇಲೆ ಈ ಚೌಕಟ್ಟನ್ನು ಮತ್ತು ಭಾರವಾಹಕಗಳ ಪೀಠಗಳನ್ನು ಆಯಾ ಸ್ಥಳಗಳಲ್ಲಿ ಭದ್ರವಾಗಿ ಕೂಡಿಸಿರುತ್ತಾರೆ.
ಟಾರ್ಕಿನ ಉತ್ಪತ್ತಿ: ಸ್ಟೇಟರಿನಿಂದ ಉಂಟಾದ ಆವರ್ತ ಕ್ಷೇತ್ರದ ಉತ್ತರ-ದಕ್ಷಿಣ ಧ್ರುವಗಳನ್ನು ಭ್ರಾಮಕದ ದಕ್ಷಿಣ-ಉತ್ತರ ಧ್ರುವಗಳು ಅನುಕ್ರಮವಾಗಿ ಹಿಂಬಾಲಿಸಿ ತಿರುಗುತ್ತವೆ. ಆದರೆ ತಟಸ್ಥವಾಗಿದ್ದಾಗ ಮೊಟ್ಟಮೊದಲು ತಿರುಗಿಸುವುದಕ್ಕೆ ಒಂದು ಪ್ರಾರಂಭಿಕ ಟಾರ್ಕ್ 

ಬೇಕು. ಇದನ್ನು ಮೇಲೆ ಹೇಳಿದ ಧ್ರುವ ಮುಖ ವೈಂಡಿಂಗುಗಳು ಒದಗಿಸುತ್ತವೆ. ಈ ವೈಂಡಿಂಗುಗಳ ತಾಮ್ರದ ಸಲಾಕಿಗಳಲ್ಲಿ ಪ್ರಯುಕ್ತವಾದ (ಇನ್ಡ್ಯೂಸ್ಡ್‌) ವಿದ್ಯುತ್ಪ್ರವಾಹಗಳ ಮಂಡಲಗಳು ಆವರ್ತ ಕ್ಷೇತ್ರವನ್ನು ಹಿಂಬಾಲಿಸಲು ಯತ್ನಿಸುವುದರಿಂದ ಮೋಟಾರನ್ನು 

ತಿರುಗಿಸುವುದಕ್ಕೆ ಸಾಕಾದಷ್ಟು ಟಾರ್ಕ್ ಉತ್ಪತ್ತಿಯಾಗುತ್ತದೆ. ಒಂದು ಸಾರಿ ಭ್ರಾಮಕ ಸಮ ವೇಗವನ್ನು ಪಡೆದ ಕೂಡಲೆ ಧ್ರುವಮುಖಗಳಲ್ಲಿನ ಪ್ರವಾಹ ನಿಂತುಹೋಗುತ್ತದೆ. ಆದರೆ ಇದಕ್ಕೆ ಸ್ವಲ್ಪ ಮುಂಚಿತವಾಗಿಯೇ ಧ್ರುವಗಳಿಗೆ ಪ್ರದೀಪನವನ್ನು ಒದಗಿಸುವುದರಿಂದ 

ಧ್ರುವಗಳಿಗೆ ಹೆಚ್ಚು ಕಾಂತಬಲ ಉಂಟಾಗಿ ಅವು ಮೋಟಾರ್ ನಿಂತುಬಿಡದಂತೆ ಸುತ್ತಲಾರಂಭಿಸುತ್ತವೆ.
ಹೀಗೆ ತಿರುಗುತ್ತಿರುವ ಮೋಟಾರ್ ಹೊರಗಿನ ಹೊರೆಗಳನ್ನು (ಮೆಕ್ಯಾನಿಕಲ್ ಲೋಡ್ಸ್‌) ತಿರುಗಿಸುವುದಕ್ಕೆ ಮೊದಲು ಮಾಡಿದಾಗ ಮೋಟಾರಿನಲ್ಲಿನ ಟಾರ್ಕ್ ತಾನಾಗಿಯೇ ಹೆಚ್ಚಾಗುತ್ತದೆ. ಆದರೆ ಹೀಗಾಗುವಾಗ ಇಂಡಕ್ಷನ್ ಮೋಟಾರುಗಳಂತೆ ಅಲ್ಲದೇ ಇದರ ವೇಗವೇನೂ 

ಕಡಿಮೆಯಾಗುವುದಿಲ್ಲ. ಮೋಟಾರು ಸಮವೇಗದಲ್ಲಿಯೇ ಓಡುತ್ತಿರುತ್ತದೆ. ಆದರೆ ಅದರ ಧ್ರುವಗಳು ಮಾತ್ರ ಕ್ಷೇತ್ರಕ್ಕೆ ಸ್ವಲ್ಪ ಹಿಂಜರಿದು ತಿರುಗುತ್ತಿರುತ್ತವೆ.
ಆದರೆ ಮೋಟಾರಿನ ಟಾರ್ಕ್ ಹೀಗೆ ಹೆಚ್ಚುವುದಕ್ಕೆ ಒಂದು ಮಿತಿಯಿದೆ. ಹೊರಗಿನ ಹೊರೆ ಹೆಚ್ಚಿದಂತೆ ಇದು ಮೊದ ಮೊದಲು ಹೆಚ್ಚುತ್ತ ಹೋಗುತ್ತದೆ. ಆದರ ಅತಿ ಹೆಚ್ಚಿನ ಹೊರೆ ಬಂದಾಗ ಕಡಿಮೆಯಾಗತೊಡಗುವುದು. ಹೀಗಾಗಿ ಸಮವೇಗತ್ವ ಕೆಡುವುದರಿಂದ ಮೋಟಾರ್ 

ನಿಂತುಬಿಡುವುದು. ಈ ರೀತಿಯಲ್ಲಿ ಮೋಟಾರ್ ತಿರುಗುವಿಕೆಯಿಂದ ಹೊರಬೀಳುವುದರಿಂದ ಇದಕ್ಕೆ ನಿಷ್ಟತನ ಟಾರ್ಕ್ (ಪುಲ್ ಔಟ್ ಟಾರ್ಕ್) ಎಂದು ಹೆಸರಾಗಿದೆ.
ಕ್ರಿಯಾ ವಿಧಾನ: ಸಾಧಾರಣವಾಗಿ ಏಕವೇಗ ಮೋಟಾರುಗಳ ಕ್ರಿಯಾ ವಿಧಾನವನ್ನು ಇಲ್ಲಿ ತೋರಿಸಿರುವ ಸದಿಶ ಚಿತ್ರದಿಂದ ನಮೂದಿಸುವುದು ವಾಡಿಕೆ. ಆದರೆ ಈ ಚಿತ್ರ ಬಹಿರ್ಗತ ಧ್ರುವಗಳನ್ನು ಹೊಂದಿರುವ ಏಕವೇಗ ಮೋಟಾರುಗಳಿಗೆ ಸರಿಯಾಗಿ ಅನ್ವಯಿಸುವುದಿಲ್ಲ. 

ಇಂಥ ಮೋಟಾರುಗಳ ಸದಿಶ ಚಿತ್ರವನ್ನು ಬರೆಯುವಾಗ ಬ್ಲಾಂಡೆಲ್ ದ್ವಿಪ್ರತಿಕ್ರಿಯಾ ವಿಧಾನವನ್ನು (ಟೂ ರೀಆಕ್ಷನ್ ಥಿಯೊರಿ) ಅನುಸರಿಸಬೇಕಾಗುತ್ತದೆ. ಇದರ ಪ್ರಕಾರ ಮೋಟಾರಿನ ಪ್ರವಾಹ ಎರಡು ಭಾಗಗಳಾಗಿ ವಿಂಗಡಿಸಲ್ಪಡುತ್ತದೆ; ಸರಳಾಕ್ಷ ಮತ್ತು ಚತುಷ್ಕಾಕ್ಷ 

ವಿಭಾಗಗಳೆಂದು (ಡೈರಿಕ್ಟ್‌ ಆಕ್ಸಿಸ್ ಅಂಡ್ ಕ್ವಾಡ್ರೆಚರ್ ಆಕ್ಸಿಸ್) ಇವುಗಳ ಹೆಸರು. 
ಸರಳಾಕ್ಷ ವಿಭಾಗದ ಅಕ್ಷ ಧ್ರುವದ ಮಧ್ಯ ರೇಖೆಯನ್ನು ಹೊಂದಿಕೊಳ್ಳುತ್ತದೆ. ಚತುಷ್ಕಾಕ್ಷ ವಿಭಾಗದ ಅಕ್ಷ ಉತ್ತರ-ದಕ್ಷಿಣ ಧ್ರುವಗಳ ಮಧ್ಯದಲ್ಲಿರುವ ಸಮಭಾಜಕ ರೇಖೆಯಾಗಿರುತ್ತದೆ. ಮೊದಲಿನ ವಿಭಾಗ ಧ್ರುವಗಳ ಕಾಂತ ಬಲವನ್ನು ನೇರವಾಗಿ ಹೆಚ್ಚು ಅಥವಾ ಕಡಿಮೆ 

ಮಾಡುತ್ತದೆ. ಎರಡನೆಯ ಭಾಗ ಈ ಬಲವನ್ನು ಅಡ್ಡಮಾರ್ಗವಾಗಿ ಸೆಳೆಯುತ್ತದೆ.
ಸಮವೇಗೀಕರಣ ಸಾಮಥರ್ಯ್‌ (ಸಿಂಕ್ರನೈಸಿಂಗ್ ಪವರ್) : ಮೇಲೆ ವಿವರಿಸಿದಂತೆ ಮೋಟಾರಿನ ಧ್ರುವಗಳು ಸ್ವಲ್ಪ ಹಿಂಜರಿಯುವುದರಿಂದ ಟಾರ್ಕ್ ಬೆಳೆದು ಅವನ್ನು ಮುಂದೆ ಸೆಳೆಯುತ್ತದೆ. ಇದೇ ರೀತಿ ಯಂತ್ರಹೊರೆ ಸ್ವಲ್ಪ ಕಡಿಮೆಯಾದಾಗ ಧ್ರುವಗಳು ಮುಂದೋಡಲು 

ಪ್ರಯತ್ನಿಸಿ ಮತ್ತೆ ಇದೇ ಕಾರಣದಿಂದ ಹಿಂದಕ್ಕೆ ಸೆಳೆಯಲ್ಪಡುತ್ತವೆ. ಹೀಗೆ ಮೋಟಾರನ್ನು ಒಂದೇ ಸಮನಾದ ವೇಗದಲ್ಲಿರುವಂತೆ ಮಾಡುವುದಕ್ಕೆ ಸಾಕಾಗುವಷ್ಟು ವಿದ್ಯುಚ್ಛಕ್ತಿ ಸರಬರಾಜಿನ ತಂತಿಗಳಿಂದ (ಲೈನ್ಸ್‌) ಒದಗುತ್ತದೆ. ಇದಕ್ಕೆ ಸಮವೇಗೀಕರಣ ಸಾಮಥರ್ಯ್‌ 

ಎನ್ನುತ್ತಾರೆ.
ಅವಸ್ಥಾಂದೋಲನ (ಫೇಸ್û ಸ್ವಿಂಗಿಂಗ್) ಅಥವಾ ಹಂಟಿಂಗ್: ಮೋಟಾರ್ ತಿರುಗಿಸುತ್ತಿರುವ ಹೊರೆ ಥಟ್ಟನೆ ಬಿಟ್ಟುಹೋದರೆ ಅಥವಾ ಕಡಿಮೆಯಾದರೆ ಮೋಟಾರಿನೊಳಗಿನ ಸೆಳೆತಕ್ಕೆ ಇದ್ದಕ್ಕಿದ್ದ ಹಾಗೆ ತಡೆ ಕಡಿಮೆಯಾಗುವುದು. ಆಗ ಮೋಟಾರ್ ಸಮವೇಗಕ್ಕಿಂತ ಹೆಚ್ಚು 

ವೇಗದಲ್ಲಿ ಓಡಲು ಪ್ರಯತ್ನಿಸುವುದು. ಆಗ ಸಮವೇಗೀಕರಣ ಸಾಮಥರ್ಯ್‌ ಬೆಳೆದು ಅದನ್ನು ಹಿಂದೆ ಸೆಳೆಯುವುದು. ಹಠಾತ್ತನೆ ಬಂದ ಈ ಹಿಂದೆಳೆತದಿಂದ ಮೋಟಾರಿನ ವೇಗ ಸಮವೇಗಕ್ಕಿಂತ ಕಡಿಮೆಯಾಗತೊಡಗುವುದು. ಆಗ ಮತ್ತೆ ಸಮವೇಗೀಕರಣ ಸಾಮಥರ್ಯ್‌ 

ಉಂಟಾಗಿ ಅದನ್ನು ಮುಂದಕ್ಕೆಳೆಯುವುದು. ಈ ರೀತಿ ಪೈಪೋಟಿಯ ದೆಸೆಯಿಂದ ಮೋಟಾರಿನ ವೇಗದಲ್ಲಿ ಆಂದೋಲನ ಅಥವಾ ಹಂಟಿಂಗ್ (ಷಿಕಾರಿ) ಉಂಟಾಗುತ್ತದೆ. ಈ ವಿಧದ ಆಂದೋಲನವನ್ನು ತಡೆಗಟ್ಟುವುದರಲ್ಲಿ ಧ್ರುವಗಳ ಮುಖ ವೈಂಡಿಂಗುಗಳು ಅತಿ ಮುಖ್ಯ 

ಪಾತ್ರವನ್ನು ವಹಿಸುತ್ತವೆ. ಆಂದೋಲನದ ಚಲನಶಕ್ತಿ ಈ ಮುಖ ವೈಂಡಿಂಗುಗಳಲ್ಲಿ ಪ್ರವಾಹದ ರೂಪದಲ್ಲಿ ಹರಿದು ಬೇಗ ಖರ್ಚಾಗಿ ಹೋಗುವುದರಿಂದ ಆಂದೋಲನ ನಿಂತುಹೋಗಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಮುಖ ವೈಂಡಿಂಗುಗಳಿಗೆ ಡ್ಯಾಂಪರ್ 

ವೈಂಡಿಂಗುಗಳೆಂಬ ಹೆಸರು ಬಂದಿದೆ.
ಸ್ಪಂದಿಸುವ ಹೊರೆಗಳು (ಪಲ್ಸೇಟಿಂಗ್ ಲೋಡ್ಸ್‌) : ಏಕವೇಗದ ಮೋಟಾರುಗಳ ಹೊರೆಗಳ ಪಂಪುಗಳಾಗಲೀ ಕಂಪ್ರೆಸರ್ ಅಥವಾ ಮತ್ತಿತರ ತರಹದ ಸ್ಪಂದಕ ಗುಣವುಳ್ಳ ಭಾಗಗಳಾಗಲೀ ಆಗಿದ್ದರೆ ಮೇಲೆ ಹೇಳಿದ ಕಾರಣಗಳಿಂದ ಎಡೆಬಿಡದೆ ಆಂದೋಲನಗಳುಂಟಾಗಿ 

ಅನಾವಶ್ಯಕವಾಗಿ ವಿದ್ಯುಚ್ಛಕ್ತಿಯ ನಷ್ಟವುಂಟಾಗುವುದಲ್ಲದೆ ಡ್ಯಾಂಪರ್ ವೈಂಡಿಂಗುಗಳು ಹೆಚ್ಚು ಬಿಸಿಯಾಗುವುದರಿಂದ ಮೋಟಾರಿಗೆ ಹಾನಿಯುಂಟಾಗಬಹುದು. ಆದ್ದರಿಂದ ಈ ವಿಧದ ಹೊರೆಯನ್ನು ತಿರುಗಿಸುವಾಗ ಹಾಗೆ ತಿರುಗತಕ್ಕ ಭಾಗಗಳ ಜಡತ್ವದ (ಇನರ್ಷಿಯ) 

ಅಂಕಿಗಳನ್ನು ಲಕ್ಷಿಸಬೇಕು. ಇವು ಸಾಲದಿದ್ದರೆ ಗತಿನಿಯಂತ್ರಕ ಗಾಲಿಯ (ಫ್ಲೈವಿಲ್) ಉಪಯೋಗದ ಮೂಲಕ ಇದನ್ನು ಸಾಕಾಗುವಷ್ಟು ಹೆಚ್ಚಿಸಬೇಕು. ಈ ಸಂದರ್ಭದಲ್ಲಿ ಗಮನಿಸಬೇಕಾದ ಮತ್ತೊಂದು ಬಹು ಮುಖ್ಯ ಅಂಶವಿದೆ. ಅದು ಮೋಟಾರಿನ ಹೊರೆಗಳ ಸ್ಪಂದನದ 

ಆವರ್ತ ಸಂಖ್ಯೆ ಮೋಟಾರ್ ಮತ್ತು ಅದನ್ನು ನಡೆಸುತ್ತಿರುವ ವಿದ್ಯುತ್ಪಥದ ಸ್ವಾಭಾವಿಕ ಆವರ್ತಸಂಖ್ಯೆಯ (ನ್ಯಾಚುರಲ್ ಫ್ರೀಕ್ವೆನ್ಸಿ) ಸಮೀಪದಲ್ಲಿದ್ದರೆ ಅಂಥ ಸಂದರ್ಭಗಳಲ್ಲಿ ಅಪಾಯಕರವಾದ ಅನುನಾದ (ರೆಸೊನೆನ್ಸ್‌) ಉಂಟಾಗಬಹುದು. ವಿಶೇಷವಾಗಿ ಇಂಥ 

ಸನ್ನಿವೇಶಗಳು ಕಂಪ್ರೆಸರುಗಳನ್ನು ಚಲಿಸುತ್ತಿರುವಾಗ ಉದ್ಭವಿಸುವುವು. ಆದ್ದರಿಂದ ಆ ಸಂದರ್ಭಗಳನ್ನು ಜಾಗರೂಕತೆಯಿಂದ ವಿಮರ್ಶೆ ಮಾಡಬೇಕು. ಈ ವಿಷಯದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಎ.ಎಸ್.ಎ ಸಂಸ್ಥೆ ಉಪಯುಕ್ತವಾದ ಕೆಲವು ಸೂತ್ರಗಳನ್ನು ಗೊತ್ತು 

ಮಾಡಿದೆ. ಅವುಗಳ ಸಹಾಯದಿಂದ ಸ್ವಾಭಾವಿಕ ಆವರ್ತ ಸಂಖ್ಯೆ, ಕಂಪ್ರೆಸರ್ ಫ್ಯಾಕ್ಟರ್ ಮುಂತಾದ ಅಂಕಿಗಳನ್ನು ನಿಷ್ಕರ್ಷಿಸಿ ಗತಿನಿಯಂತ್ರಕ ಗಾಲಿಯ ತೂಕ ಮತ್ತು ವ್ಯಾಸ ಎಷ್ಟಿರಬೇಕೆಂದು ನಿಶ್ಚಿಯಿಸಲು ಸಾಧ್ಯವಾಗುತ್ತದೆ.
ಗಿ ರೇಖೆಗಳು: ಏಕವೇಗದ ಮೋಟಾರಿನ ಒಂದು ವಿಶೇಷ ಗುಣವೇನೆಂದರೆ ಅದರ ಸಾಮಥರ್ಯ್‌ ಗುಣಕವನ್ನು (ಪವರ್ ಫ್ಯಾಕ್ಟರ್) ನೂರಕ್ಕೆ ನೂರರಷ್ಟು ಉತ್ತಮವಾಗಿ ಮಾಡಲು ಸಾಧ್ಯವಿದೆ. ವಸ್ತುತ: ಅದರ ಸಾಮಥರ್ಯ್‌ಗುಣಕವನ್ನು ಎಷ್ಟುಬೇಕಾದರಷ್ಟು 

ಅಗ್ರಗಾಮಿಯನ್ನಾಗಲಿ ಅನುಗಾಮಿಯನ್ನಾಗಲಿ ಮಾಡಬಹುದು. ಉದಾಹರಣೆಗೆ, 500 ಕಿಲೋವಾಟುಗಳಷ್ಟು ಹೊರೆಯನ್ನು ತಿರುಗಿಸುತ್ತಿರುವ ಒಂದು ಮೋಟಾರಿನ ಪ್ರದೀಪನವನ್ನು ಸ್ವಲ್ಪ ಪ್ರಮಾಣದಲ್ಲಿ ಇಟ್ಟಿದ್ದರೆ ಮೋಟಾರಿನ ಆರ್ಮೆಚರಿನ ಪ್ರವಾಹ ಬಹಳ 

ಅನುಗಾಮಿಯಾಗಿಯೂ ಹೆಚ್ಚು ಪ್ರಮಾಣದ್ದಾಗಿಯೂ ಇರುತ್ತದೆ. ಆದರೆ ಪ್ರದೀಪವನ್ನು ಕ್ರಮೇಣ ಹೆಚ್ಚಿಸುತ್ತ ಹೋದರೆ ಮೊದಲು ಸಾಮಥರ್ಯ್‌ಗುಣಕ ಹೆಚ್ಚುತ್ತದೆ ಮತ್ತು ಆರ್ಮೆಚರ್ ಪ್ರವಾಹ ಕಡಿಮೆಯಾಗುತ್ತದೆ. ಆದರೆ ಅದರ ಸಾಮಥರ್ಯ್‌ಗುಣಕ ನೂರಕ್ಕೆ ನೂರರಷ್ಟು 

ಉತ್ತಮವಾದಾಗ, ಅಂದರೆ 1.0 ಆದಾಗ, ಪ್ರದೀಪನವನ್ನು ಮತ್ತಷ್ಟು ಹೆಚ್ಚು ಮಾಡಿದರೆ ಆರ್ಮೆಚರ್ ಪ್ರವಾಹ ಅಗ್ರಗಾಮಿಯಾಗತೊಡಗಿ ಹೆಚ್ಚುವುದು ಮತ್ತು ಸಾಮಥರ್ಯ್‌ ಗುಣಕ ಅಗ್ರಗಾಮಿತೆಯ ದಿಕ್ಕಿನಲ್ಲಿ 1.0 ಗಿಂತ ಕೆಳಗಿಳಿಯುತ್ತ ಬರುವುದು. ಈ ಪ್ರಯೋಗಗಳ 

ಫಲಿತಾಂಶಗಳನ್ನು ಗ್ರಾಫಿನ ಮೂಲಕ ನಮೂದಿಸಿದಾಗ ಗಿ ಅಕ್ಷರದ ಆಕೃತಿಯ ರೇಖೆಗಳು ದೊರೆಯುತ್ತವೆ. ಈ ರೇಖೆಗಳನ್ನು ಗಿ ರೇಖೆಗಳು ಎಂದು ಕರೆಯುತ್ತಾರೆ.
ಔದ್ಯಮಿಕ ಉಪಯೋಗಗಳು: ಕೈಗಾರಿಕೆಯ ಉದ್ಯಮಗಳಲ್ಲಿ ಏಕವೇಗದ ಮೋಟಾರುಗಳು ಅಧಿಕ ವ್ಯಾಪ್ತಿ ಪಡೆದಿವೆ. ಅದರಲ್ಲಿಯೂ ಸಹ ನಿಯಮಿತವಾಗಿ ಒಂದೇ ವೇಗದಲ್ಲಿ ಓಡಬೇಕಾದ ಯಂತ್ರಗಳಿದ್ದೆಡೆಯಲ್ಲಿ ಇವುಗಳಿಗೆ ಮಾನ್ಯತೆ ಹೆಚ್ಚು. ಇದಕ್ಕೆ ಮುಖ್ಯ ಕಾರಣಗಳೆಂದರೆ 

ಇವು ಸಾಮಾನ್ಯವಾಗಿ ಇಂಡಕ್ಷನ್ ಮೋಟಾರುಗಳಿಗಿಂತ ಬೆಲೆಯಲ್ಲಿ ಕಡಿಮೆ ಮತ್ತು ಸಾಮಥರ್ಯ್‌ ಗುಣಕದಲ್ಲಿಯೂ ದಕ್ಷತೆಯಲ್ಲಿಯೂ ಹೆಚ್ಚು. ಇವುಗಳಿಗೆ ಬೇಕಾಗುವ ನೆಲದಳತೆ ಇಂಡಕ್ಷನ್ ಮೋಟಾರುಗಳಿಗಿಂತ ಸಾಧಾರಣವಾಗಿ ಕಡಿಮೆ. ಆದರೆ ಪ್ರದೀಪನಕ್ಕಾಗಿ 

ಹೊರಗಿನ ಆಲ್ಟರ್ನೇಟರುಗಳು ಬೇಕಾಗುವುದರ ದೆಸೆಯಿಂದ ಈ ಮೋಟಾರುಗಳ ಉದ್ದಳತೆ ಹೆಚ್ಚು.
ಚಾಲನೆಯ ವಿಧಾನಗಳು (ಸ್ಟಾರ್ಟಿಂಗ್ ಮೆಥಡ್ಸ್‌): ಮೇಲೆ ನಮೂದಿಸಿದಂತೆ ಏಕವೇಗದ ಮೋಟಾರುಗಳನ್ನು ತಿರುಗಿಸಲು ಅವುಗಳ ಡ್ಯಾಂಪರ್ ವೈಂಡಿಂಗುಗಳ ಸಹಾಯದಿಂದ ಇಂಡಕ್ಷನ್ ಮೋಟಾರುಗಳಂತೆಯೇ ತಿರುಗಿಸಲು ಉಪಕ್ರಮಿಸಬೇಕು. ಆದರೆ ಹೀಗೆ 

ಮಾಡುವುದಕ್ಕೆ ಮುಂಚೆ ಧ್ರುವಗಳ ಡಿಸಿ ವೈಂಡಿಂಗುಗಳನ್ನು ನಿರೋಧಕದ (ರೆಸಿಸ್ಟೆನ್ಸ್‌) ಮೂಲಕ ಲಘುಮಂಡಲಗೊಳಿಸಬೇಕಾಗುತ್ತದೆ (ಷಾರ್ಟ್ ಸಕೂರ್ಯ್‌ಟ್). ಕಾರಣ, ಮೊದಲನೆಯದಾಗಿ ಡಿಸಿ ವೈಂಡಿಂಗುಗಳಲ್ಲಿ ಉದ್ಭವಿಸಬಹುದಾದ ಹೆಚ್ಚು ಪ್ರಮಾಣದ ಪ್ರಯುಕ್ತ 

(ಇಂಡ್ಯೂಸ್ಡ್‌) ಎಸಿ ವೋಲ್ಟೇಜುಗಳನ್ನು ತಡೆದು ಹಿಡಿಯಬೇಕಾದ್ದು ಅತ್ಯಾವಶ್ಯಕ. ಎರಡನೆಯದಾಗಿ, ಡಿಸಿ ವೈಂಡಿಂಗುಗಳಲ್ಲಿಯೂ ಎಸಿ ಪ್ರವಾಹವನ್ನು ಈ ರೀತಿಯಾಗಿ ಹರಿಯುವಂತೆ ಮಾಡಿದರೆ ರೋಟರಿನ ಮೇಲೆ ಉಂಟಾಗುವ ಟಾರ್ಕ್ ಮತ್ತಷ್ಟು ಹೆಚ್ಚುವುದರಿಂದ 

ಮೋಟಾರನ್ನು ತಿರುಗಿಸುವುದರಲ್ಲಿ ಸಹಾಯವಾಗುವುದು.
ಸಣ್ಣ ಮೋಟಾರುಗಳನ್ನು ತಿರುಗಿಸುವಾಗ ನೇರವಾಗಿ ಎಸಿ ತಂತಿಗಳಿಂದಲೇ (ಮೆಯಿನ್ಸ್‌) ಚಲನಗೊಳಿಸಬಹುದು. ಆದರೆ ದೊಡ್ಡ ಮೋಟಾರುಗಳನ್ನು ತಿರುಗಿಸುವುದಕ್ಕಾಗಿ ಪ್ರಾರಂಭಕಗಳು (ಸ್ಟಾರ್ಟರುಗಳು) ಬೇಕಾಗುತ್ತವೆ. ಒಂದು ತರಹದ ಪ್ರಾರಂಭದಲ್ಲಿ ಆಟೋಟ್ರಾನ್ಸ್‌ 

ಫಾರ್ಮರುಗಳನ್ನು ಉಪಯೋಗಿಸಿ ಮೊದಲಿಗೆ ವೋಲ್ಟೇಜನ್ನು ಕಡಿಮೆಮಾಡಿ ಚಾಲನ ಪ್ರವಾಹ ಬಹಳ ದೊಡ್ಡದಾಗಿ ಬೆಳೆಯದಂತೆ ತಡೆಯಲ್ಪಡುತ್ತದೆ. ಕಾರ್ನ್ಡಾರ್ಫರ್ ವಿಧಾನದಲ್ಲಿ ಹೆಜ್ಜೆಗಳುಳ್ಳ (ಟ್ಯಾಪ್ ಚೇಂಜಿಂಗ್) ಆಟೋಟ್ರಾನ್ಸ್‌ಫಾರ್ಮರುಗಳನ್ನು ಉಪಯೋಗಿಸಿ 

ವೋಲ್ಟೇಜಿನ ಪರಿಪುರ್ಣಪ್ರಭಾವ ಕ್ರಮೇಣ ಮೋಟಾರಿಗೆ ಒದಗುವಂತೆ ಮಾಡಿರುತ್ತಾರೆ. ದೊಡ್ಡ ಯಂತ್ರಗಳಲ್ಲಿ ಒತ್ತು ಗುಂಡಿಗಳ (ಪುಷ್ ಬಟನ್ಸ್‌) ಮೂಲಕ ಈ ಎಲ್ಲ ಕೆಲಸಗಳೂ ತಾವಾಗಿಯೇ ನೆರವೇರುವಂತೆ ಮಾಡಿರುತ್ತಾರೆ.
ಇನ್ನೊಂದು ತರಹದ ಯಂತ್ರದಲ್ಲಿ ಪ್ರತಿಕಾರಕ ಕುಂಡಲಗಳ (ರಿಆಕ್ಟೆನ್ಸ್‌ ಕಾಯಿಲ್ಸ್‌) ಮೂಲಕ ವೋಲ್ಟೇಜನ್ನು ಕಡಿಮೆಮಾಡಿ ಮೋಟಾರ್ ಸಮಾನವೇಗವನ್ನು ಮುಟ್ಟಿದ ಅನಂತರ ಆ ಕುಂಡಲಗಳನ್ನು ಬೇರ್ಪಡಿಸಲಾಗುತ್ತದೆ.
ಕೆಲವು ಸಂದರ್ಭಗಳಲ್ಲಿ ಮೋಟಾರ್ ದೊಡ್ಡದಾಗಿದ್ದರೂ ಅದು ತಿರುಗಿಸುವ ಯಂತ್ರದ ಹೊರೆ ಮೊದಲು ಬಹಳ ಕಡಿಮೆಯಾಗಿದ್ದು ಆಮೇಲೆ ಹೆಚ್ಚುತ್ತದೆ. ಉದಾಹರಣೆಗೆ ಡಿಸಿ ಆಲ್ಟರ್ನೇಟರುಗಳನ್ನು ತಿರುಗಿಸುವ ಎಸಿ ಮೋಟಾರುಗಳು. ಈ ಸಂದರ್ಭಗಳಲ್ಲಿ ಬ್ಯಾಟರಿಯಿಂದ 

ಓಡುವ ಒಂದು ಸಣ್ಣ ಡಿಸಿ ಮೋಟಾರಿನ ಚಾಲಕದ ಮೂಲಕ ಎಸಿ ಮೋಟಾರನ್ನು ತಿರುಗುವಂತೆ ಮಾಡಿ ಸಮವೇಗಕ್ಕೆ ತರಬಹುದು. ಅನಂತರ ಎಸಿ ವೋಲ್ಟೇಜಿನ ಮೂಲಕ ಮೋಟಾರ್ ಓಡಲಾರಂಭಿಸುತ್ತದೆ. ಮತ್ತೆ ಕೆಲವು ಸನ್ನಿವೇಶಗಳಲ್ಲಿ ಮೋಟಾರ್ ತಿರುಗುವುದಕ್ಕೆ 

ಮೊದಲಿನಿಂದಲೇ ಹೆಚ್ಚಿನ ಹೊರೆ ಅದರ ದಂಡಕ್ಕೆ ಬಿಗಿಯಲ್ಪಟ್ಟಿರಬಹುದು. ಇಂಥ ಸಂದರ್ಭಗಳಲ್ಲಿ ಚಾಲನ ಪ್ರವಾಹ ಅತಿ ಹೆಚ್ಚಾಗದಂತೆ ತಡೆಯುವ ಸಲುವಾಗಿ ಕ್ಲಚ್ಚುಗಳನ್ನು ಉಪಯೋಗಿಸುತ್ತಾರೆ. ಇವು ಸ್ವಯಂ ಪ್ರೇರಿತವಾದ ಕೇಂದ್ರಾಪಗಾಮಿ (ಸೆಂಟ್ರಿಫ್ಯೂಗಲ್) 

ವೈದ್ಯುತಿಕ ಅಥವಾ ದ್ರವಚಾಲಕ (ಹೈಡ್ರಾಲಿಕ್) ಕ್ಲಚ್ಚುಗಳಾಗಿರಬಹುದು; ಅಥವಾ ಕೈಯಿಂದಲೇ ಚಲಿಸುವ ಕ್ಲಚ್ಚುಗಳಾಗಿಯೂ ಇರಬಹುದು.
ವಿಶಿಷ್ಟ ರೀತಿಯ ಉಪಯೋಗಗಳು: ಒಂದು ಏಕವೇಗದ ಮೋಟಾರನ್ನು ಕೆಲವು ಸಾರಿ ಬೇರೆ ಬೇರೆ ವೇಗಗಳಲ್ಲಿ ಓಡತಕ್ಕಂತೆ ಮಾಡಬೇಕಾಗಿ ಬರುತ್ತದೆ. ಸ್ಟೇಟರಿನಲ್ಲಿರುವ ವೈಂಡಿಂಗುಗಳ ಕುಂಡಲಗಳನ್ನು (ಕಾಯಿಲ್ಸ್‌) ಎರಡು ಭಾಗಗಳಲ್ಲಿ ರಚಿಸಿ ಆ ಭಾಗಗಳು ಎರಡು 

ರೀತಿಯಲ್ಲಿ ಸಂಯೋಗಿಸುವಂತೆ ಮಾಡುವುದರಿಂದ ಮತ್ತು ಪ್ರದೀಪನವರ್ತನಗಳನ್ನು ಎರಡು ಭಾಗಗಳಲ್ಲಿ ಸುತ್ತಿ ಎರಡು ವಿಧಗಳಲ್ಲಿ ಸೇರುವಂತೆ ಮಾಡುವುದರಿಂದಲೂ ಒಂದೇ ಮೋಟಾರ್ ಎರಡು ವೇಗಗಳಲ್ಲಿ ಓಡುವಂತಾಗುತ್ತದೆ. ಈಚಿನ ವರ್ಷಗಳಲ್ಲಿ ಪಂಪ್ಡ್‌ ಸ್ಟೋರೇಜ್ 

ಪದ್ಧತಿಯ ವಿದ್ಯುದಾಗಾರಗಳು ಹೆಚ್ಚು ಬಳಕೆಗೆ ಬರುತ್ತಿರುವುದರಿಂದ ಈ ತರಹದ ದ್ವಿಭಿನ್ನವೇಗದ ಏಕವೇಗ ಮೋಟಾರುಗಳನ್ನು ಉಪಯೋಗಿಸತೊಡಗಿದ್ದಾರೆ. ಈ ಆಗಾರಗಳಲ್ಲಿ ಸಾಮಾನ್ಯವಾಗಿ ಒಂದೇ ಯಂತ್ರವನ್ನು ಆಲ್ಟರ್ನೇಟರಾಗಿಯೂ ಮೋಟಾರಾಗಿಯೂ 

ಉಪಯೋಗಿಸುವುದು ರೂಢಿಯಲ್ಲಿದೆ. ಮೋಟಾರಾಗಿ ಓಡುವಾಗ ಅದರ ವೇಗ ಆಲ್ಟರ್ನೇಟರ್ ಆಗಿದ್ದಾಗಿಗಿಂತ 20ರಷ್ಟು ಹೆಚ್ಚಾಗಿರಬೇಕಾಗಿ ಬರುತ್ತದೆ. ಆದ್ದರಿಂದ 10 ಧ್ರುವಗಳುಳ್ಳ ಆಲ್ಟರ್ನೇಟರನ್ನು 8 ಧ್ರುವಗಳುಳ್ಳ ತಿರುಗುವಂತೆ ಮಾಡುವುದರಿಂದ ಪಂಪನ್ನು 

ಚಲಾಯಿಸಲು ಸಾಧ್ಯವಾಗುತ್ತದೆ.
ಇನ್ನೊಂದು ಬಹಳ ಮುಖ್ಯವಾದ ವಿಶೇಷ ಉಪಯೋಗವೇನೆಂದರೆ ಏಕವೇಗದ ಮೋಟಾರುಗಳಿಗೆ ಹೆಚ್ಚು ಪ್ರದೀಪನವನ್ನುಂಟುಮಾಡಿ ಕಂಡೆನ್ಸರಿನಂತೆ ಉಪಯೋಗಿಸಬಹುದು. ಹೀಗೆ ಉಪಯೋಗಿಸತಕ್ಕ ಯಂತ್ರವನ್ನು ಏಕವೇಗ ಕಂಡೆನ್ಸರ್ (ಸಿಂಕ್ರನಸ್ ಕಂಡೆನ್ಸರ್) ಎಂದು 

ಕರೆಯುತ್ತಾರೆ. ಬಹಳ ಉದ್ದನೆಯ ಮತ್ತು ಬಹಳ ಹೆಚ್ಚು ವೋಲ್ಟೇಜಿನ ವಾಹಕ ತಂತಿಗಳಿಗೆ (ಟ್ರಾನ್ಸ್‌ಮಿಷನ್ ಲೈನ್ಸ್‌) ಈ ವಿಧದ ಕಂಡೆನ್ಸರುಗಳ ಆವಶ್ಯಕತೆ ಇದೆ. ಈಗಿನ ಕಾಲದಲ್ಲಿ ಈ ವಿಧದ ಕಂಡೆನ್ಸರುಗಳನ್ನು ಒಂದು ಲಕ್ಷ ಕೆ.ವಿ.ಎ.ಗಳ ಸಾಮಥರ್ಯ್‌ದವರೆಗೂ ತಯಾರು 

ಮಾಡುತ್ತಾರೆ. ಇವು ಬಿಸಿಲು ಮಳೆಗಾಳಿಗಳನ್ನು ಸಹಿಸುವಂತೆ ನಿರ್ಮಿಸಲ್ಪಟ್ಟು ಕಟ್ಟಡದ ಹೊರಗಡೆಯೇ ಕೆಲಸಮಾಡುವಂತೆ ತಯಾರಾಗಿರುತ್ತವೆ. ಇನ್ನೊಂದು ವಿಶೇಷವೇನೆಂದರೆ ಈ ಯಂತ್ರಗಳೊಳಗೆ ಗಾಳಿಯ ಬದಲಾಗಿ ಹೈಡ್ರೊಜನ್ ಅನಿಲವನ್ನು ಉಪಯೋಗಿಸುತ್ತಾರೆ. 

ಹೈಡ್ರೋಜನ್ನಿನ ಉಷ್ಣವಹನತೆ (ಥರ್ಮಲ್ ಕಂಡಕ್ಟಿವಿಟಿ) ಗಾಳಿಗಿಂತ ಏಳರಷ್ಟು ಹೆಚ್ಚಾಗಿರುವುದರಿಂದ ಈ ವಿಧದ ಮೋಟಾರುಗಳು ತಂಪಾಗಿ ಕೆಲಸ ಮಾಡುತ್ತವೆ ಮತ್ತು ಈ ಕಾರಣದಿಂದ ಅವು, ಅವಶ್ಯಬಂದಾಗ ಅತಿ ಹೆಚ್ಚು ಹೊರೆಗಳನ್ನು ವಹಿಸಲು ಸಾಧ್ಯವಾಗುತ್ತದೆ. 

ಇಷ್ಟೇ ಅಲ್ಲದೆ ಹೈಡ್ರೊಜನ್ ಗಾಳಿಗಿಂತ ಹಗುರವಾಗಿರುವುದರಿಂದ ಈ ಮೋಟಾರುಗಳಲ್ಲಿ ಉಂಟಾಗುವ ವಾಯು ನಷ್ಟಗಳು (ವಿಂಡೇಜ್ ಲಾಸಸ್) ಬಹಳ ಕಡಿಮೆ. ಆದರೆ ಹೈಡ್ರೊಜನ್ನಿನ ಜೊತೆಗೆ ಗಾಳಿ ಬೆರೆತರೆ ಆಸ್ಫೋಟನೆಯಾಗುವ ಅಪಾಯವಿರುವುದರಿಂದ ಈ ರೀತಿಯ 

ಮೋಟಾರುಗಳಲ್ಲಿ ಹೈಡ್ರೊಜನ್ನಿನ ಪ್ರಮಾಣ 95% ಕ್ಕಿಂತ ಕಡಿಮೆ ಆಗದಂತೆ ಬಹಳ ಜಾಗರೂಕತೆಯ ಏರ್ಪಾಡುಗಳು ಅಗತ್ಯ. ಆಧುನಿಕ ವ್ಯವಹಾರದಲ್ಲಿ ಸುಮಾರು 20,000 ಕಿಲೋವಾಟುಗಳಿಗಿಂತ ದೊಡ್ಡ ಮತ್ತು ಹೆಚ್ಚುವೇಗದ ಮೋಟಾರುಗಳಲ್ಲಿ ಮಾತ್ರ 

ಹೈಡ್ರೊಜನ್ನಿನ ಉಪಯೋಗ ಪ್ರಚುರವಾಗಿದೆ.                		                                                     (ಎಂ.ವಿ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ